29/10/2017
ಗಣಕ ಇತಿಹಾಸ
ಗಣಕ ವಿಜ್ಞಾನವೆಂದು ಒಪ್ಪಲಾದ ಸಿದ್ಧಾಂತದ ಮುಂಚಿನ ತಳಹದಿಗಳು ಆಧುನಿಕ ಅಂಕೀಯ ಗಣಕಯಂತ್ರದ ಆವಿಷ್ಕರಣಕ್ಕಿಂತಲೂ ಹಿಂದಿನ ದಿನಾಂಕದ್ದಾಗಿವೆ. ಮಣಿಚೌಕಟ್ಟಿನಂತಹ (ಅಬ್ಯಾಕಸ್) ನಿಗದಿತ ಅಂಕೀಯ ಕಾರ್ಯಗಳ ಲೆಕ್ಕಮಾಡುವ ಯಂತ್ರಗಳು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ವಿಲ್‌ಹೆಲ್ಮ್ ಶಿಕಾರ್ಡ್ ಮೊದಲ ಯಾಂತ್ರಿಕ ಲೆಕ್ಕದ ಕೋಷ್ಟಕವನ್ನು (ಕ್ಯಾಲ್ಕ್ಯುಲೇಟರ್) ೧೬೨೩ರಲ್ಲಿ ರೂಪಿಸಿದನು. ಚಾರ್ಲ್ಸ್ ಬ್ಯಾಬಿಜ್ ಏಡಾ ಲವ್‌ಲೇಸ್‌ಳ ಸಹಾಯದಿಂದ ಒಂದು ವ್ಯತ್ಯಾಸ ಯಂತ್ರವನ್ನು (ಡಿಫ಼ರನ್ಸ್ ಎಂಜನ್) ರಾಣಿ ವಿಕ್ಟೋರಿಯಾಳ ಕಾಲದಲ್ಲಿ ರೂಪಿಸಿದನು. ೧೯೦೦ರ ಸರಿಸುಮಾರು, ರಂಧ್ರಕ ಯಂತ್ರಗಳನ್ನು (ಪಂಚ್-ಕಾರ್ಡ್ ಮಷೀನ್) ಪರಿಚಯಿಸಲಾಯಿತು. ಆದರೆ, ಈ ಎಲ್ಲ ಯಂತ್ರಗಳು ಒಂದೇ ಕಾರ್ಯವನ್ನು ಮಾಡಬಲ್ಲವಾಗಿದ್ದವು, ಅಥವಾ ಅತ್ಯುತ್ತಮ ಮಟ್ಟದಲ್ಲಿ ಎಲ್ಲ ಸಂಭವನೀಯ ಕಾರ್ಯಗಳ ಪೈಕಿ ಯಾವುದೋ ಒಂದು ಉಪವರ್ಗವನ್ನು ನಿರ್ವಹಿಸುತ್ತಿದ್ದವು. ೧೯೪೦ರ ದಶಕದ ಅವಧಿಯಲ್ಲಿ, ಮತ್ತಷ್ಟು ಹೊಸದಾದ ಮತ್ತು ಹೆಚ್ಚು ಶಕ್ತಿಯುಳ್ಳ ಗಣನಾ ಯಂತ್ರಗಳನ್ನು ಅಭಿವೃದ್ಧಿಗೊಳಿಸಲಾಯಿತು, ಮತ್ತು ಅವುಗಳ ಮಾನವ ಪೂರ್ವವರ್ತಿಗಳ ಬದಲಾಗಿ ಗಣಕಯಂತ್ರ ಪದವು ಈ ಯಂತ್ರಗಳನ್ನು ನಿರ್ದೇಶಿಸಲು ಬಳಸಲಾಯಿತು. ಕೇವಲ ಗಣಿತದ ಲೆಕ್ಕಾಚಾರಗಳಿಗಷ್ಟೇ ಅಲ್ಲದೆ ಇನ್ನೂ ಹೆಚ್ಚಿನದಕ್ಕೆ ಗಣಕಯಂತ್ರಗಳನ್ನು ಬಳಸಬಹುದೆಂದು ಸ್ಪಷ್ಟವಾದಾಗ, ಗಣಕ ವಿಜ್ಞಾನದ ಕಾರ್ಯಕ್ಷೇತ್ರವು ಒಟ್ಟಾರೆಯಾಗಿ ಗಣನೆಯ ಅಧ್ಯಯನವನ್ನು ಒಳಗೊಳ್ಳುವಂತೆ ವಿಸ್ತರಿಸಿತು. ೧೯೫೦ರ ದಶಕ ಮತ್ತು ೧೯೬೦ರ ದಶಕದ ಪ್ರಾರಂಭದಲ್ಲಿ ಮೊದಲ ಗಣಕ ವಿಜ್ಞಾನ ವಿಭಾಗಗಳು ಮತ್ತು ಶೈಕ್ಷಣಿಕ ಪದವಿ ಕ್ರಮಗಳ ರಚನೆಯೊಂದಿಗೆ ಗಣಕ ವಿಜ್ಞಾನವನ್ನು ಒಂದು ಪ್ರತ್ಯೇಕ ಸೈದ್ಧಾಂತಿಕ ಶಿಕ್ಷಣ ವಿಷಯವಾಗಿ ಸ್ಥಾಪನೆಯಾಗುವುದು ಪ್ರಾರಂಭವಾಯಿತು. ಕಾರ್ಯರೂಪದ ಗಣಕಯಂತ್ರಗಳು ದೊರಕಲು ಆರಂಭವಾದಾಗಿನಿಂದ, ಗಣನೆಯ ಹಲವು ಉಪಯೋಗಗಳು ಅವುಗಳ ಸ್ವಂತ ಸಾಮರ್ಥ್ಯದಿಂದ ಪ್ರತ್ಯೇಕ ಅಧ್ಯಯನ ಕ್ಷೇತ್ರಗಳಾಗಿವೆ. ಗಣಕಯಂತ್ರಗಳು ವಾಸ್ತವಿಕವಾಗಿ ಒಂದು ವೈಜ್ಞಾನಿಕ ಕಾರ್ಯಕ್ಷೇತ್ರವಾಗುವುದು ಅಸಾಧ್ಯವೆಂದು ಹಲವರು ಪ್ರಾರಂಭದಲ್ಲಿ ನಂಬಿದ್ದರಾದರೂ, ಐವತ್ತರ ದಶಕದ ಕೊನೆಯ ವರ್ಷಗಳಲ್ಲಿ ಕ್ರಮೇಣವಾಗಿ ಶೈಕ್ಷಣಿಕ ಜನಸಂಖ್ಯೆಯ ಹಲವರಿಂದ ಅದು ಅಂಗೀಕೃತಗೊಂಡಿತು. ಈಗ ಹೆಸರುವಾಸಿಯಾಗಿರುವ ಆಯ್‌ಬೀಎಮ್ ಚಿಹ್ನೆಯು ಆ ಕಾಲದಲ್ಲಿ ಗಣಕ ವಿಜ್ಞಾನ ಕ್ರಾಂತಿಯ ಒಂದು ಭಾಗವಾಗಿತ್ತು. ಅಂತಹ ಸಾಧನಗಳ ಅನ್ವೇಷಣಾ ಅವಧಿಯ (ಎಕ್ಸ್‌ಪ್ಲರೇಶನ್ ಪೀರಿಯಡ್) ಕಾಲದಲ್ಲಿ ವ್ಯಾಪಕವಾಗಿ ಬಳಸಲಾದ ಆಯ್‌ಬೀಎಮ್ ೭೦೪ ಮತ್ತು ನಂತರ ಆಯ್‌ಬೀಎಮ್ ೭೦೯ ಸರಣಿಯ ಗಣಕಯಂತ್ರಗಳನ್ನು ಆಯ್‌ಬೀಎಮ್ (ಇಂಟರ್‌ನ್ಯಾಶನಲ್ ಬಿಸ಼ಿನೆಸ್ ಮಶೀನ್ಸ್ ಎಂಬುದರ ಹ್ರಸ್ವರೂಪ) ಸಂಸ್ಥೆ ಬಿಡುಗಡೆ ಮಾಡಿತು. "ಇಷ್ಟಾದರೂ, ಆಯ್‌ಬೀಎಮ್ ಗಣಕಯಂತ್ರದೊಂದಿಗೆ ಕೆಲಸಮಾಡುವುದು ನಿರಾಶಾದಾಯಕವಾಗಿತ್ತು...ಒಂದು ಆದೇಶದಲ್ಲಿ ಒಂದೇ ಒಂದು ಅಕ್ಷರವನ್ನು ನೀವು ತಪ್ಪುಜಾಗದಲ್ಲಿಟ್ಟಿದ್ದರೆ, ಕ್ರಮವಿಧಿಯು ಕಾರ್ಯಮಾಡುವುದನ್ನು ನಿಲ್ಲಿಸಿಬಿಡುತ್ತಿತ್ತು, ಮತ್ತು ನೀವು ಸಂಪೂರ್ಣ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸಬೇಕಾಗುತ್ತಿತ್ತು". ೧೯೫೦ರ ದಶಕದ ಕೊನೆಯ ವರ್ಷಗಳಲ್ಲಿ, ಗಣಕ ವಿಜ್ಞಾನದ ವಿಷಯವು ಅದರ ಅತ್ಯಂತ ಆರಂಭಿಕ ಬೆಳವಣಿಗೆಯ ಹಂತಗಳಲ್ಲಿತ್ತು, ಮತ್ತು ಇಂತಹ ವಿಷಯಗಳು ಸಾಮಾನ್ಯವಾಗಿದ್ದವು. ಗಣಕ ವಿಜ್ಞಾನ ತಂತ್ರಶಾಸ್ತ್ರದ ಉಪಯುಕ್ತತೆ ಮತ್ತು ಸಾಮರ್ಥ್ಯದಲ್ಲಿ ಕಾಲವು ಗಮನಾರ್ಹ ಸುಧಾರಣೆಗಳನ್ನು ಕಂಡಿದೆ. ಆಧುನಿಕ ಸಮಾಜ, ಗಣಕಯಂತ್ರಗಳ ಬಳಕೆಯು ಕೇವಲ ಪರಿಣತರು ಅಥವಾ ವೃತ್ತಿನಿರತರಿಂದ ಆಗುತ್ತಿದ್ದ ಕಾಲದಿಂದ ಹೆಚ್ಚು ವ್ಯಾಪಕ ಬಳಕೆದಾರ ನೆಲೆಗಾಗಿರುವ ಒಂದು ಗಮನಾರ್ಹ ಬದಲಾವಣೆಯನ್ನು ಕಂಡಿದೆ.